ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜ.14ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ‘ಬಗ್ಗಿ ಜೀಪ್’ ಎಂದು ಕರೆಯಲಾಗುವ ಸಮುದ್ರ ನೀರನ್ನು ಶುದ್ಧೀಕರಿಸುವ ಸಂಚಾರಿ ಘಟಕವನ್ನು ಹಸ್ತಾಂತರಿಸಲಿದ್ದಾರೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್​ಗೆ ಭೇಟಿ ನೀಡಿದ್ದಾಗ ನೆಥನ್ಯಾಹು ಜತೆ ಮೆಡಿಟರೇನಿಯನ್ ಸಮುದ್ರ ತೀರಲ್ಲಿ ಜೀಪ್ ಮೇಲೆ ಸಂಚಾರ ಮಾಡಿ, ನೀರು ಶುದ್ಧೀಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಈಗ ಇಂಥದೇ ಜೀಪನ್ನು ಭಾರತಕ್ಕೆ ಉಡುಗೊರೆಯಾಗಿ ನೀಡಲು ನೆಥನ್ಯಾಹು ನಿರ್ಧರಿಸಿದ್ದಾರೆ. ಈ ಜೀಪ್ ನೀರು ಶುದ್ಧೀಕರಣ ಘಟಕ ಹೊಂದಿದೆ. ಸಮುದ್ರದ ನೀರನ್ನೂ ಕುಡಿಯಲು ಯೋಗ್ಯವಾದ ರೀತಿಯಲ್ಲಿ ಇದು ಶುದ್ಧೀಕರಿಸುತ್ತದೆ. ನೈಸರ್ಗಿಕ ವಿಕೋಪ ಸಂಭವಿಸಿದಾಗ, ಸೇನೆ ಬಳಕೆಗೆ, ಗ್ರಾಮೀಣ ಭಾಗಗಳಲ್ಲಿ ಈ ವಾಹನ ಬಳಕೆ ಮಾಡಿಕೊಳ್ಳಬಹುದು. ಸ್ಥಳಕ್ಕೆ ತೆರಳಿ ನೀರು ಶುದ್ಧೀಕರಿಸುವ ಈ ಜೀಪ್​ನಿಂದ ಜನರಿಗೆ ಅನುಕೂಲವಾಗಲಿದೆ.

ಏನಿದು ಬಗ್ಗಿ ಜೀಪ್?

ಇಸ್ರೇಲ್​ನ ಗಾಲ್ ವಾಟರ್ ಟೆಕ್ನಾಲಜಿ ಎಂಬ ಖಾಸಗಿ ಕಂಪನಿ ಈ ಜೀಪ್ ತಯಾರಿಸುತ್ತದೆ. ಇಂಥ ಜೀಪ್ ತಯಾರಿಸುವ ವಿಶ್ವದ ಏಕಮಾತ್ರ ಕಂಪನಿ ಇದಾಗಿದೆ. ಈ ತಂತ್ರಜ್ಞಾನ ಬಳಕೆ ಹಾಗೂ ವಿನ್ಯಾಸ ಕುರಿತು ಕಂಪನಿ ಜಾಗತಿಕ ಪೇಟೆಂಟ್ ಪಡೆದುಕೊಂಡಿದೆ. ಇಸ್ರೇಲ್​ನಲ್ಲಿ ಅಂತರ್ಜಲ ಹಾಗೂ ನೀರಿನ ಮೂಲಗಳ ಕೊರತೆಯಿದೆ. ಹೀಗಾಗಿ ಸಮುದ್ರ ನೀರನ್ನು ಶುದ್ಧೀಕರಿಸುವ ಹಾಗೂ ನೀರು ಶುದ್ಧೀಕರಣ ಸಂಚಾರಿ ಘಟಕ ಅಭಿವೃದ್ಧಿ ಪಡಿಸಲಾಗಿದೆ. ಈ ಜೀಪ್​ಗಳನ್ನು ಕಂಪನಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ.

ವಿಶೇಷತೆಯೇನು?

1540 ಕೆಜಿ ತೂಕ
ನದಿ, ಕೆರೆ, ಬಾವಿ ಇನ್ನಿತರ ಯಾವುದೇ ಜಲಮೂಲಗಳಿಂದ ನೀರು ಪಡೆದು ಶುದ್ಧೀಕರಿಸುವ ಸಾಮರ್ಥ್ಯ
ಅತ್ಯಾಧುನಿಕ ಸ್ವಯಂ ನಿಯಂತ್ರಣ ತಂತ್ರಜ್ಞಾನ ಅಳವಡಿಸಲಾಗಿದ್ದು, ಮಾನವನ ಹಸ್ತಕ್ಷೇಪ ಇಲ್ಲದೆ ಶುದ್ಧೀಕರಣ ಪ್ರಕ್ರಿಯೆ ನಡೆಸಬಲ್ಲದು. ಹೀಗಾಗಿ ಇದರ ನಿರ್ವಹಣೆಗೆ ಇಬ್ಬರು ಸಾಕು.
ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ ಗುಣಮಟ್ಟದಲ್ಲಿ ಶುದ್ಧೀಕರಣ.
ಎಲ್ಲ ಹವಾಮಾನ, ಸನ್ನಿವೇಷದಲ್ಲಿ ಇದು ಕೆಲಸ ಮಾಡಬಲ್ಲದು.
ಪ್ರತಿಗಂಟೆಗೆ 90ಕಿ.ಮೀ. ವೇಗದಲ್ಲಿ ಜೀಪ್ ಚಲಿಸಬಲ್ಲದು.
ಇಂಧನ ಪೂರೈಕೆಗೆ ಸ್ವತಂತ್ರ ವ್ಯವಸ್ಥೆ.
ಗರಿಷ್ಠ 2,650 ಗ್ಯಾಲನ್ ನೀರು ಹಿಡಿಯುವಷ್ಟು ದೊಡ್ಡ ಟ್ಯಾಂಕ್ ಜೀಪ್​ನಲ್ಲಿ ಲಭ್ಯ. ನೀರು ಶುದ್ಧೀಕರಿಸಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಸಾಗಿಸಬಹುದು.
12 ವಾಟ್ ವೊಲ್ಟೇಜ್ ವಿದ್ಯುತ್ ಪೂರೈಕೆಯಲ್ಲೂ ಶುದ್ಧೀಕರಣ ಘಟಕ ಕೆಲಸ ಮಾಡಬಲ್ಲದು.
ಜೀಪ್ ಚಿಕ್ಕದಾಗಿದ್ದು ದೂರದ ಪ್ರದೇಶಗಳಿಗೂ ಸುಲಭವಾಗಿ ರವಾನೆ ಮಾಡಬಹುದು.
ಒಂದು ದಿನಕ್ಕೆ 20 ಸಾವಿರ ಲೀಟರ್ ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾಗಿ ಪರಿವರ್ತನೆ.
ದಿನಕ್ಕೆ 80 ಸಾವಿರ ಲೀಟರ್ ಕಲುಷಿತ, ಮಣ್ಣುಮಿಶ್ರಿತ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಶುದ್ಧೀಕರಣ.
70 ಲಕ್ಷ ರೂ. ವೆಚ್ಚ

ಒಂದು ಜೀಪಿನ ಬೆಲೆ ಸುಮಾರು 70 ಲಕ್ಷ ರೂ. (1.1 ಲಕ್ಷ ಡಾಲರ್) ಆಗಿದೆ. ಇದು ಯಾವುದೇ ಬಗೆಯ ನೀರನ್ನು ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿರುವ ಗುಣಮಟ್ಟಕ್ಕೆ ಅನುಗುಣವಾಗಿ ಶುದ್ಧೀಕರಿಸುತ್ತದೆ.

ಭಾರತಕ್ಕೇನು ಪ್ರಯೋಜನ?

ದೇಶದ ಹತ್ತಾರು ಕೋಟಿ ಜನರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ದೇಶದ ನದಿ, ಕೆರೆ ಇನ್ನಿತರ ಜಲಮೂಲಗಳು ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಜನಸಂಖ್ಯೆಯೂ ವೇಗವಾಗಿ ಏರಿಕೆಯಾಗುತ್ತಿದ್ದು, ಶುದ್ಧ ಕುಡಿಯುವ ನೀರು ಪೂರೈಕೆ ಸರ್ಕಾರಕ್ಕೆ ಸವಾಲಿನ ಸಂಗತಿಯಾಗಿದೆ. ಕುಡಿಯುವ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಬಗ್ಗಿ ಜೀಪ್ ಮೂಲಕ ಶುದ್ಧ ನೀರು ಒದಗಿಸಬಹುದಾಗಿದೆ.

Leave a Reply

Your email address will not be published. Required fields are marked *