ಧರ್ಮದ ನೀತಿ ಎಲ್ಲರನ್ನು ಒಂದುಗೂಡಿಸಲಿ

ಹಾನಗಲ್ಲ: ರಾಜಕೀಯ ದಾಳಕ್ಕೆ ವೀರಶೈವ ಲಿಂಗಾಯತ ನೌಕರರು ಬಲಿಯಾಗದೇ ಉಪಜಾತಿ ಭೇದಗಳಿಂದ ಹೊರಬಂದು ಒಂದಾಗಿ ಬಾಳಬೇಕು ಎಂದು ಅಕ್ಕಿಆಲೂರಿನ ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಮನವಿ ಮಾಡಿದರು.

ಶನಿವಾರ ಹಾನಗಲ್ಲಿನ ಶ್ರೀ ವೀರಭದ್ರೇಶ್ವರ ಮಂದಿರದ ಸಭಾಭವನದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹಾನಗಲ್ಲ ತಾಲೂಕು ಘಟಕದ ಅಧಿಕಾರ ಗ್ರಹಣ ಹಾಗೂ ತಾಲೂಕು ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಧರ್ಮದ ನೀತಿ ನಿಯಮಗಳು ನಮ್ಮನ್ನು ಕೂಡಿಸಬೇಕೆ ಹೊರತು, ವಿಂಗಡಿಸುವುದಲ್ಲ. 98 ಉಪಪಂಗಡಗಳನ್ನು ಹೊಂದಿರುವ ವೀರಶೈವ ಲಿಂಗಾಯತ ಧರ್ಮ ಒಂದಾಗಿ ಸಾಗುವಂತೆ ಸಾಮಾಜಿಕ ಚಿಂತನೆಗಳನ್ನು ಹಾನಗಲ್ಲಿನ ಲಿಂ.ಕುಮಾರಶಿವಯೋಗಿಗಳವರು ಮಹಾಸಭೆ ಸ್ಥಾಪಿಸುವ ಮೂಲಕ ಜಗತ್ತಿಗೆ ಸಾರಿದ್ದಾರೆ. ವೀರಶೈವ ಲಿಂಗಾಯತ ಸುಶಿಕ್ಷಿತ ನೌಕರರು ಉತ್ತಮ ಆಚರಣೆಗಳನ್ನು ಅಳವಡಿಸಿಕೊಂಡು ನಾಡಿಗೆ ಮಾದರಿಯಾಗಬೇಕು. ಸಮಾಜವನ್ನು ಒಡೆಯುವ ಷಡ್ಯಂತ್ರಗಳಿಗೆ ಬಲಿಯಾಗುವುದು ಬೇಡ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ರೊ.ಎನ್‌.ವಿ.ಕಂಬಾಳಿಮಠ, ಈಗ ವೀರಶೈವ ಲಿಂಗಾಯತದ ಅಸ್ತಿತ್ವ ಆತಂಕದಲ್ಲಿದೆ. ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಮಾಜ ಒಡೆಯುತ್ತಿದೆ. ಬಹು ಸಂಖ್ಯಾತ ಲಿಂಗಾಯತರು ಅವಗಣನೆಗೆ ಒಳಗಾಗಿದ್ದಾರೆ. ರಾಜಕಾರಣಿಗಳಿಗೆ ಲಿಂಗಾಯತರ ಕೋಟಾ ಬೇಕು. ಆದರೆ ಲಿಂಗಾಯತರು ಬೇಡ. ಮೀಸಲಾತಿ ಹೆಸರಿನಲ್ಲಿ ಕಾಯಕ ಧರ್ಮವಾದ ಲಿಂಗಾಯತ ಹಲವು ವಾದ ವಿವಾದಗಳಿಂದ ಜನ ಸಮುದಾಯದಲ್ಲಿ ಕೀಳು ಚರ್ಚೆಗೂ ಮಣೆ ಹಾಕುತ್ತಿದೆ. ಈಗ ವೀರಶೈವ ಲಿಂಗಾಯತ ನೌಕರರು ಒಟ್ಟಾಗಿ ಸಂಘಟನೆ ಒಡೆಯದಂತೆ ನಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾಗಿದೆ ಎಂದರು.

ನೂತನ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್‌.ಕರೆಣ್ಣನವರ ಅವರಿಗೆ ನಿಕಟಪೂರ್ವ ಅಧ್ಯಕ್ಷ ನಿರಂಜನ ಗುಡಿ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ನೌಕರರು ಕೇವಲ ನೌಕರರ ಸಂಘಟನೆ ಅಷ್ಟೇ ಅಲ್ಲ, ಲಿಂಗಾಯತ ಯುವ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯಕ್ಕೆ ಒತ್ತು ನೀಡಬೇಕು. ನೌಕರರಿಗೆ ಸಮಸ್ಯೆ ಬಂದಾಗ ಒಟ್ಟಾಗಿ ಪರಿಹಾರಕ್ಕೆ ಮುಂದಾಗೋಣ. ಇದೇ ಸಂಘಟನೆಯ ಸದುದ್ದೇಶ ಎಂದರು.

ಜಿಲ್ಲಾ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಆಶಯ ಮಾತುಗಳನ್ನಾಡಿದರು. ಜಿಲ್ಲಾ ಗೌರವಾಧ್ಯಕ್ಷ ಎಸ್‌.ಬಿ.ಕಿನ್ನಾಳ, ತಾಲೂಕು ಗೌರವಾಧ್ಯಕ್ಷ ಎನ್‌.ಎಂ.ಪಾಟೀಲ, ಕಾರವಾರ ಜಿಲ್ಲಾಧ್ಯಕ್ಷ ಎನ್‌.ಜಿ.ಕಾಮನಹಳ್ಳಿ, ಮುಂಡಗೋಡ ತಾಲೂಕಾಧ್ಯಕ್ಷ ಶ್ರೀಶೈಲ ಐನಾಪೂರ, ಎಸ್‌.ಬಿ.ಬಾಗಿಲದವರ, ಎ.ಎಸ್‌.ಪಾಟೀಲ ಮುಖ್ಯ ಅತಿಥಿಗಳಾಗಿದ್ದರು.

Leave a Reply

Your email address will not be published. Required fields are marked *